ರಸನಿಮಿಷಗಳು! part 3

ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಅಂದು ಸಂಜೆಯೇ ಅಕ್ಕಪಕ್ಕದ ಮನೆಯ ಮುತ್ತೈದೆಯರೆಲ್ಲಾ ಆ ಮನೆಯಲ್ಲಿ ಬಂದು ಸೇರತೊಡಗಿದರು. ಅವರೆಲ್ಲಾ ಅಲ್ಲಿಗೆ ಬಂದು ಸೇರತೊಡಗಿದ ಮೇಲೆ ಆ ಮನೆಯಲ್ಲಿ ಗಂಡಸರಿಗಿನ್ನೇನು ಕೆಲಸ? ನಾನು ಮನೆಯ ಅಂಗಳಕ್ಕೆ ಬಂದು ಯಥಾ ಪ್ರಕಾರ ಅಲ್ಲಿಡಲಾಗಿದ್ದ ಕಲ್ಲು ಚಪ್ಪಡಿಯ ಮೇಲೆ ಕುಳಿತುಕೊಂಡೆ. ಅಕ್ಕಪಕ್ಕದ ಮನೆಯ ಮುತ್ತೈದೆಯರೂ, ಪ್ರಾಯಕ್ಕೆ ಬಂದ ಸೊಬಗಿಯರೂ ಒಬ್ಬರ ಹಿಂದೆ ಒಬ್ಬರಾಗಿ ಧಾವಿಸತೊಡಗಿದರು.

ಬಣ್ಣ ಬಣ್ಣದ ಉಡುಗೆತೊಡುಗೆಗಳಲ್ಲಿ ಬರುವ ಆ ಮುತ್ತೈದೆಯರಿಗಿಂತಲೂ, ಆಗ ತಾನೇ ಪ್ರಾಯಕ್ಕೆ ಬಂದ ಲಾವಣ್ಯವತಿಯರನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿತ್ತು. ನನ್ನ ಮನಸ್ಸೆಂಬ ಹಕ್ಕಿಗೆ ರೆಕ್ಕೆಯು ಮೂಡಿ ಬಾನಲ್ಲಿ ಗರಿಗೆದರಿ ಹಾರತೊಡಗಿದ್ದು ಆಗಲೇ! ಹರುಷದ ಸಿಂಚನಕ್ಕೆ ಸಪ್ತವರ್ಣಗಳ ಕಾಮನಬಿಲ್ಲು ಸಹ ಮೂಡಿ ನಿಂತಿತ್ತು; ಆದರೆ ಆಕಾಶದಲ್ಲಲ್ಲ, ಹೃದಯವೆಂಬ ಬಾನಿನಲ್ಲಿ!

ಅಚ್ಚರಿಯ ಸಂಗತಿಯೆಂದರೆ, ಅಲ್ಲಿದ್ದ ಪುಟ್ಟ ಕೊಠಡಿಯಲ್ಲಿ ಬಂದು ಸೇರಿದ ಮುತ್ತೈದೆಯರು, ಹರೆಯದ ಲಲನೆಯರು ಅದು ಹೇಗೆ ಸ್ಥಳಾವಕಾಶ ಮಾಡಿಕೊಂಡು ಕುಳಿತುಕೊಳ್ಳುತ್ತಿದ್ದರೋ ಗೊತ್ತಾಗಲಿಲ್ಲ. ಮಹಿಳೆಯರಂತೂ ಇನ್ನೂ ಬರುತ್ತಲೇ ಇದ್ದರು. ಬಂದು ಒಳ ಸೇರುತ್ತಲೂ ಇದ್ದರು. ಬಂದವರೆಲ್ಲಾ ಎಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದಾರೆಂಬುದೇ ನನಗೆ ತಿಳಿಯಲಿಲ್ಲ. ಬಂದವರಾರೂ ಸ್ಥಳವಿಲ್ಲವೆಂದು ಹೊರಗೂ ಉಳಿಯಲಿಲ್ಲ.

ಇದ್ದಕ್ಕಿದ್ದಂತೆ ಅಲ್ಲಿಯ ಪರಿಸರದಲ್ಲಿ ಬದಲಾವಣೆಯು ಕಾಣಿಸಿಕೊಂಡಿತು. ಲವಲವಿಕೆ, ಸಡಗರಗಳು ಹೆಚ್ಚಾದವು. ಅದೇ ಸಮಯಕ್ಕೆ ಒಳಗೆ ಸೇರಿದ್ದ ಲಲನೆಯರ ಇಂಪಾದ ಧ್ವನಿ ಕೇಳಿಬಂತು. ಒಳಗೆ ಕುಳಿತಿದ್ದ ಕೋಗಿಲೆಗಳು ಹಾಡತೊಡಗಿದವು. ನಾನೆದ್ದು ಕುತೂಹಲದಿಂದ ಅಲ್ಲಿದ್ದ ಕಿಟಕಿಯ ಮೂಲಕ ಒಳಕ್ಕೆ ಕಣ್ಣನ್ನು ಹಾಯಿಸಿದೆ. ಹಾಡಿನ ನಡುವೆ ಬಂಗಾರದ ಮೈಯ ಸುಂದರ ಯುವತಿಯೋರ್ವಳು ತಿಳಿ ಹಸಿರು ಬಣ್ಣದ ಲಂಗ ಮತ್ತು ಬ್ಲೌಸನ್ನು ತೊಟ್ಟು ಅದರ ಮೇಲೆ ಹಚ್ಚ ಹಸಿರು ಬಣ್ಣದ ದಾವಣಿಯನ್ನು ಸುತ್ತಿ, ತಲೆಯಲ್ಲಿ ಮಲ್ಲಿಗೆಯ ದಂಡೆಯನ್ನು ಏರಿಸಿಕೊಂಡು ಮುಡಿದುಕೊಂಡು ಲಜ್ಜೆಯಿಂದ ಮೆಲ್ಲನೆ ನಡೆದು ಬರುವ ಸುಂದರ ದೃಶ್ಯ ಕಣ್ಣಿಗೆ ಬಿತ್ತು.

ಮೊದಲ ನೋಟಕ್ಕೇ ಆಕೆ ದೇವಲೋಕದ ಸುಂದರಿಯೇನೋ ಎನ್ನುವಂತೆ ಕಾಣಿಸಿದಳು. ಆ ಸೊಬಗಿನ ಕನ್ನಿಕೆಯ ಅಕ್ಕಪಕ್ಕದಲ್ಲಿ ಬಹುಶಃ ಆಕೆಯ ಗೆಳತಿಯರಿರಬೇಕೆಂದು ಕಾಣುತ್ತೆ ಒಂದೈದಾರು ಜನರಿದ್ದರು. ಅವರೂ ಹಾಡುತ್ತಾ, ಸೊಬಗಿನ ಕನ್ನಿಕೆಯ ಕೈಯನ್ನು ಹಿಡಿದು ನಡೆಸಿಕೊಂಡು ಬರುತ್ತಿದ್ದರು.

ಆ ಕೊಠಡಿಯ ಒಂದು ಪಕ್ಕದಲ್ಲಿ ಶೃಂಗರಿಸಿದ ಸ್ಟೂಲನ್ನು ಇಡಲಾಗಿತ್ತು. ಆಗ ತಾನೇ ಅರಳಿದ ಹೂವಿನಂತೆ ಕಂಗೊಳಿಸುತ್ತಿದ್ದ ಆ ಕನ್ನಿಕೆಯನ್ನು ಕರೆತಂದ ಅವಳ ಸಖಿಯರು ಆ ಸ್ಟೂಲಿನ ಮೇಲೆ ಅವಳನ್ನು ಕುಳ್ಳಿರಿಸಿ, ತಾವು ಆಕೆಯ ಹಿಂದೆ ಸರಿದು ಸಾಲಾಗಿ ನಿಂತರು. ವಿವಿಧ ವರ್ಣಗಳ ಉಡುಗೆಗಳಲ್ಲಿ ಶೋಭಿಸಿದ ಆ ಬೆಡಗಿಯರು ಆ ಕುಸುಮ ಕೋಮಲೆಗೆ ಹಿನ್ನಲೆಯಾಗಿ ನಿಂತಂತೆ ಕಾಣಿಸಿದರು, ಹೊನ್ನಬಣ್ಣದ ಆ ಸುಂದರಿ ಅವರ ಮುಂದೆ ಕುಳಿತಿದ್ದಳು. ನಾನು ನನ್ನ ಕಣ್ಣುಗಳಲ್ಲಿ ಆ ಸೊಬಗಿಯ ಚಿತ್ರವನ್ನು ತುಂಬಿಕೊಂಡೆ. ಆಕೆ ಆಂಟಿಗಿಂತಲೂ ಸುಂದರವಾಗಿರುವಂತೆ ಕಂಡು ನನ್ನ ಚಿತ್ತವನ್ನು ಸೆಳೆದಳು.

ಸಂಕೋಚ ಹಾಗೂ ನಾಚಿಕೆಯು ಮುಖದಲ್ಲಿ ಸುಳಿದಾಗ ಹೆಣ್ಣು ಎಷ್ಟು ಸುಂದರಳಾಗಿ ಕಾಣಿಸುತ್ತಾಳೆ ಎನ್ನುವುದಕ್ಕೆ ಆಂಟಿಯ ತಂಗಿಯೇ ಸಾಕ್ಷಿಯಾಗಿದ್ದಳು. ಆಕೆ ಗೆಳತಿಯರ ನಡುವೆ ಇದ್ದರೂ, ನೋಡುಗರ ಕಂಗಳು ತನ್ನ ಮೇಲಿರುವುದನ್ನು ಕಂಡು ಸಂಕೋಚ ಹಾಗೂ ನಾಚಿಕೆಯಿಂದ ಮುದ್ದೆಯಾಗಿದ್ದಳು. ಅದರ ಪರಿಣಾಮ ಅವಳ ಮುಖದ ಮೇಲಾಗಿತ್ತು. ಅದು ಅರುಣರಾಗವನ್ನು ತಳೆದಿತ್ತು. ಆ ಸೌಂದರ್ಯವನ್ನು ಕಣ್ಣುಗಳಲ್ಲಿ ತುಂಬಿಕೊಂಡು ಹೆಚ್ಚು ಹೊತ್ತು ನಿಲ್ಲಲಾರದೇ ನಾನು ಕಲ್ಲು ಚಪ್ಪಡಿಗಳ ಬಳಿ ಬಂದು ಅದರ ಮೇಲೆ ಕುಳಿತುಕೊಂಡೆ. ಹೃದಯದಲ್ಲಿ ಅದೇನೋ ಒಂದು ರೀತಿಯ ತಳಮಳ ಅಥವಾ ಹರುಷದ ಹೊನಲು ಹೃದಯದ ತುಡಿತದೊಂದಿಗೆ ಸೇರಿ ನಾನೊಂದು ರೀತಿಯ ಭಾವಪರವಶತೆಗೆ ಒಳಗಾಗಿದ್ದೆ. ಮನಸ್ಸು, ಹೃದಯಗಳು ನನ್ನ ಅಂಕೆಯನ್ನೇ ಮೀರಿರುವಂತೆ ನನಗನ್ನಿಸಿತು.

ಮನೆಯ ಒಳಗೆ ಸಡಗರದ ಕಲರವ ಮುಂದುವರಿದಿತ್ತು. ನನ್ನ ಮನದಲ್ಲಿ ಆ ಚೆಲುವೆಯ ನಾಚಿಕೆದುಂಬಿದ ವದನವು ಪ್ರತಿಷ್ಟಾಪನೆಗೊಂಡಿತ್ತು. ನಾನು ನನ್ನದೇ ಆದ ಭಾವನಾ ಲೋಕದಲ್ಲಿ ಕಾಲಿರಿಸಿದೆ.

ಭಾವಪರವಶಕ್ಕೆ ಒಳಗಾಗಿ ಯಾವುದೋ ಲೋಕಕ್ಕೆ ಹೊರಟುಹೋಗಿದ್ದ ನನ್ನನ್ನು ಎಚ್ಚರಿಸಿದ್ದು, ಕಾರ್ತಿಕ್ ಮತ್ತು ಯಶೋದ. ಅವರಿಬ್ಬರೂ ಬಂದು, “ಮಾಮಾ ದೇವಸ್ಥಾನಕ್ಕೆ ಹೋಗೋಣ ಬಾ” ಎನ್ನುತ್ತಾ ಕೈ ಹಿಡಿದು ಎಳೆದಾಗಲೇ ನಾನು ವಾಸ್ತವ ಜಗತ್ತಿಗೆ ಬಂದಿದ್ದು.

ಸೂರ್ಯನು ಆಗಲೇ ಪಡುವಣದಂಚಿನಲ್ಲಿ ಮರೆಯಾಗಿದ್ದ. ಸಂಜೆಯ ತಂಗಾಳಿ ಹಿತವಾಗಿತ್ತು.

ನಾನು, ಸೌಭಾಗ್ಯ ಆಂಟಿ ಮತ್ತು ಪುಠಾಣಿಗಳಿಬ್ಬರೂ ಸೇರಿ ಒಟ್ಟು ನಾಲ್ಕು ಜನರು ಹೊಯ್ಸಳೇಶ್ವರ ದೇವಸ್ಥಾನಕ್ಕೆ ಹೊರಟೆವು. ಯಶೋದ ನನ್ನ ಕೈ ಹಿಡಿದಿದ್ದಳು. ಕಾರ್ತಿಕ್ ಆಂಟಿಯ ಜೊತೆಗಿದ್ದ. ಅಂದು ಆಂಟಿ ಗಾಢ ಹಸಿರು ಬಣ್ಣದ ರೇಷ್ಮೆ ಸೀರೆಯಲ್ಲಿ ಸೊಗಸಾಗಿ ಕಾಣಿಸುತ್ತಿದ್ದರು. ಬಂಗಾರದ ಜರಿಯಿರುವ ಆ ಹಸಿರು ಸೀರೆಯನ್ನುಟ್ಟ ಅವರು ಎಂತಹವರ ಕಣ್ಣನ್ನೂ ಸೆಳೆಯುವಂತೆ ಕಾಣುತ್ತಿದ್ದರು. ತಲೆಗೆ ಎಣ್ಣೆ ಹಾಕದ ಕಾರಣಕ್ಕೋ ಏನೋ ಗಾಳಿಗೆ ಚೆದುರಿದ ಮುಂಗುರುಳುಗಳು ಧಾರಾಳವಾಗಿ ಅವರ ಮುಖದ ಮೇಲೆ ಬಿದ್ದಿದ್ದವು. ರಾತ್ರಿಯಲ್ಲಿ ಸುತ್ತುವರಿದ ಮೋಡಗಳ ರಾಶಿಯ ನಡುವೆ ಹುಣ್ಣಿಮೆಯ ಚಂದ್ರ ಕಾಣಿಸಿಕೊಂಡಂತೆ ಆಂಟಿಯ ಸ್ನಿಗ್ದ ಸೌಂದರ್ಯದ ಮುಖಾರವಿಂದ ಕಾಣಿಸುತ್ತಿತ್ತು.

“ನಿಮಗೊಬ್ಬಳು ತಂಗಿ ಇದಾಳೇಂತ ನೀವು ಹೇಳ್ಲೇ ಇಲ್ಲ?” ಆಕ್ಷೇಪದ ಧ್ವನಿಯಲ್ಲಿ ನಾನು ಆಂಟಿಯನ್ನು ಪ್ರಶ್ನಿಸಿದೆ.

“ನೀನು ಕೇಳಿದ್ರೆ ತಾನೇ ನಾನು ಹೇಳೋದು” ಎಂದು ಕೊಂಕುನೋಟವೊಂದನ್ನು ಬೀರಿ ತನ್ನದೇನೂ ತಪ್ಪಿಲ್ಲ ಎಂಬಂತೆ ನುಡಿದರು ಆಂಟಿ.

ಆಂಟಿಯ ಹೆಜ್ಜೆಗೆ ತಾಳಬದ್ದವಾಗಿ ಅವರು ಬಲಗೈಯಲ್ಲಿ ಹಿಡಿದಿದ್ದ ಪೂಜಾಸಾಮಗ್ರಿಗಳ ಬುಟ್ಟಿ ಹಿಂದೆ ಮುಂದೆ ಲೋಲಕದಂತೆ ಆಡುತ್ತಿತ್ತು.

ಅವರ ಎಡಗೈಯು ನಡೆಯುವಾಗ ಸೀರೆಯು ತೊಡರದಂತೆ ಸೀರೆಯ ನಿರಿಗೆಯನ್ನು ಕೊಂಚವೇ ಮೇಲೆತ್ತಿ ಹಿಡಿದಿತ್ತು. ಸೀರೆ ಮೇಲೆದ್ದ ಕಾರಣಕ್ಕೆ ಅವರ ಬಿಳುಪಾದ ಸುಂದರವಾದ ಕಾಲುಗಳು ಹೊರಗೆ ಕಾಣುತ್ತಿದ್ದವು. ಆ ಬಿಳುಪಾದ ಕಾಲುಗಳಿಗೆ ಕೆಂಪು, ಕಪ್ಪು ಬಣ್ಣಗಳ ಪಟ್ಟಿಯಿರುವ ಚರ್ಮದ ಚಪ್ಪಲಿಗಳು ಒಂದು ರೀತಿಯ ವಿಶಿಷ್ಟ ಸೊಬಗನ್ನು ನೀಡಿತ್ತು.

ದೇವಸ್ಥಾನದ ಬಳಿ ಬಂದಾಗ, ನಿಧಾನವಾಗಿ ಕತ್ತಲೆಯು ಆವರಿಸಿತೊಡಗಿತು.

ಆಂಟಿ ಮತ್ತು ಮಕ್ಕಳು ದೇವಸ್ಥಾನದ ಒಳಕ್ಕೆ ಹೋದರು.

“ನಾನು ಇಲ್ಲೇ ಕುಳಿತಿರ್‍ತೀನಿ. ನೀವು ಹೋಗಿ ಪೂಜೆ ಮುಗಿಸಿ ಬನ್ನಿ” ಎಂದು ಹೇಳಿ ನಾನು ದೇವಸ್ಥಾನದ ಹೊರಗಿದ್ದ ಕಟ್ಟೆಯ ಮೇಲೆ ಕುಳಿತುಕೊಂಡೆ. ಅವರು ದೇವಸ್ಥಾನದ ಒಳಹೊಕ್ಕು ಗಂಟೆ ಭಾರಿಸಿ, ದೇವರಿಗೆ ಅಡ್ಡಬಿದ್ದು ‘ನಮ್ಮನ್ನು ಕಾಪಾಡಪ್ಪಾ’ ಎಂದು ದೇವರೊಂದಿಗೆ ಕೊಂಚ ಹೊತ್ತು ಸಂಭಾಷಣೆಯನ್ನು ನಡೆಸಿ, ದೇವಸ್ಥಾನಕ್ಕೂ ಒಂದು ಸುತ್ತು ಹಾಕಿ ಬಂದು ನಾನು ಕುಳಿತಿದ್ದ ಕಟ್ಟೆಯ ಬಳಿ ಬಂದು ನಿಂತು,

“ನಿನಗೇನು ದೇವ್ರೂ, ದಿಂಡ್ರೂಂತ ಯಾರೂ ಇಲ್ಲವೇನೋ?” ನನ್ನತ್ತ ದುರುಗುಟ್ಟಿ ನೋಡಿ ಕೇಳಿದರು ಆಂಟಿ. ಮುಖದಲ್ಲಿ ಕೋಪವಿರುವಂತೆ ಕಂಡಿತು. ಅದು ಹುಸಿಕೋಪವೋ ನಿಜವಾದ ಕೋಪವೋ ತಿಳಿಯಲಿಲ್ಲ.

“ನಮ್ಮ ತಪ್ಪನ್ನು ಮನ್ನಿಸಪ್ಪಾಂತ ದೇವಸ್ಥಾನಾನ ಸುತ್ತು ಹಾಕಿ ಬಂದಿರೋ ನೀವು ಇದೀಗ ಕೋಪ ಮಾಡ್ಕೋಂಡು ಯಾಕೆ ಪಾಪ ಕಟ್ಕೊಳ್ತಾ ಇದ್ದೀರ ಆಂಟಿ? ದೇವಸ್ಥಾನಕ್ಕೆ ಬರೋದೇ ಮನಸ್ಸಿಗೆ ನೆಮ್ಮದಿ ಸಿಗಲೀ ಅಂತ. ಇಲ್ಲಿಗೆ ಬಂದೂ ನೆಮ್ಮದೀನ ಸುಮ್‌ಸುಮ್ನೆ ಹಾಳ್ಮಾಡ್ಕೊಳ್ತೀರಲ್ಲ! ಬನ್ನಿ! ಇಲ್ಬಂದು ಸ್ವಲ್ಪ ಹೊತ್ತು ಕೂತ್ಕೊಳ್ಳಿ. ತಂಗಾಳಿ ನೋಡಿ ಎಷ್ಟು ಹಿತವಾಗಿ ಬೀಸ್ತಾ ಇದೆ. ಹೀಗೆ ಕುಳಿತ್ಕೊಂಡ್ರೆ ಮನಸೆಲ್ಲಾ ಹಗುರವಾದಂಗಾಗುತ್ತೆ. ಇದನ್ನೆಲ್ಲಾ ಅನುಭವಿಸೋದು ಬಿಟ್ಟು ಸುಮ್ನೆ ಮನಸ್ಸನ್ನ ಹಾಳ್ಮಾಡ್ಕೊಳ್ತಾ ಇದ್ದೀರಲ್ಲ!”

ಆಂಟಿ ಮಾತನಾಡಲಿಲ್ಲ. ಸುಮ್ಮನೆ ದುರದುರ ನೋಡಿ ಬಂದು ನನ್ನ ಪಕ್ಕದಲ್ಲಿ ಕುಳಿತರು.

“ಯಾರೋ ನಿನ್ ಮೈ ಮೇಲೆ ಪ್ರವೇಶ ಮಾಡ್ದಂಗಿದೆ?”

ಆಂಟಿಯ ಮೊನಚಾದ ನೋಟದೊಂದಿಗೆ ಪ್ರಶ್ನೆಯೂ ಬಂದು ನನ್ನನ್ನು ಇರಿಯಿತು.

“ಹೀಗೆಲ್ಲಾ ಮಾತೋಡೋದನ್ನ ನೀನು ಎಲ್ಲಿಂದ ಕಲಿತುಕೊಂಡೆ? ಮೊದಲೆಲ್ಲಾ ಹೀಗೆ ಮಾತಾಡ್ತಾನೇ ಇರ್‍ಲಿಲ್ಲ್ಲ!”

ಯಾವುದೋ ದೋಷವನ್ನು ಕಂಡು ಹಿಡಿದವರಂತೆ ಹೇಳಿದರು ಆಂಟಿ.

ನಾನು ಮಾತನಾಡಲಿಲ್ಲ. ಆಂಟಿಯ ಮೊಗವನ್ನು ಒಮ್ಮೆ ನೋಡಿ ತಲೆತಗ್ಗಿಸಿದೆ.

ದೇವಸ್ಥಾನವನ್ನು ಹೊಂದಿರುವ ಆ ಏಕಾಂತ ಪ್ರದೇಶದಲ್ಲಿ ಸಹನೀಯವೆನಿಸಬಹುದಾದ ಮೌನವು ನೆಲೆಸಿತ್ತು. ಸನಿಹದಲ್ಲೇ ಕುಳಿತಿದ್ದ ಆಂಟಿಯ ತಲೆಯಲ್ಲಿದ್ದ ಮಲ್ಲಿಗೆಯ ಪರಿಮಳವು ಆ ಪರಿಸರಕ್ಕೆ ಒಂದು ರೀತಿಯ ಆಹ್ಲಾದತೆಯನ್ನುಂಟುಮಾಡಿತ್ತು. ಜೊತೆಗೆ ಆಂಟಿಯ ಮಡಿಲಲ್ಲಿ ಅವರ ಎರಡೂ ಕೈಗಳಿಂದಾವೃತವಾಗಿ ಭಿಮ್ಮನೆ ಕುಳಿತಿದ್ದ ಪೂಜಾಸಾಮಗ್ರಿಗಳ ಬುಟ್ಟಿಯ ಒಳಗಿದ್ದ ಕರ್ಪೂರ, ಅರಿಷಿಣ ಕುಂಕುಮ ಹಾಗೂ ಸಂಪಿಗೆಯ ಎಸಳುಗಳ ಸುವಾಸನೆಗಳೂ ಹೊರಬಂದು ಮಲ್ಲಿಗೆಯ ಪರಿಮಳದೊಂದಿಗೆ ಬೆರೆತು ಆ ಪರಿಸರಕ್ಕೆ ಒಂದು ಬಗೆಯ ದೈವಿಕ ಸೊಬಗನ್ನು ನೀಡಿತ್ತು.

ಕಾರ್ತಿಕ್ ಮತ್ತು ಯಶೋದ ಅಲ್ಲಿದ್ದ ಕೆಲವು ಮರಗಿಡಗಳ ನಡುವೆ ನುಸುಳುತ್ತಾ ಜೂಟಾಟ ಅಡುತ್ತಿದ್ದರು. ಮನೆಯಿಂದ ಹೊರಬಂದ ಹುಮ್ಮಸ್ಸೂ, ವಯಸ್ಸಿಗೆ ಸಹಜವಾದ ಆಟದ ಮನೋಭಾವ ಅವರಲ್ಲಿ ತುಂಬಿತ್ತು. ಅವರು ಅವರದೇ ಜಗತ್ತಿನಲ್ಲಿ ವಿಹರಿಸುತ್ತಿದ್ದರು.

ಪೂರ್ವದ ಅಂಚಿನಲ್ಲಿ ಕತ್ತಲೆಯು ನಿಧಾನವಾಗಿ ತನ್ನ ಬಾಹುಗಳನ್ನು ಚಾಚತೊಡಗಿತ್ತು.

ನನ್ನತ್ತ ತಿರುಗಿದ ಆಂಟಿ,

“ನಾನು ಹೀಗನ್ತೀದೀನಿ ಅಂತ ಬೇಸರ ಮಾಡ್ಕೋಬೇಡ!”

ಎಂದು ನುಡಿದ ಒಂದು ಕ್ಷಣದ ಮೌನವನ್ನು ತಾಳಿದರು.

ನಾನು ಆಂಟಿಯ ಮೊಗವನ್ನು ನೋಡಿದೆ. ಅವರ ಮಾತಿನಲ್ಲಿ ಗಾಂಭೀರ್ಯವಿತ್ತು. ಯಾವುದೋ ಒಂದು

ಅಹಿತಕರವಾದ ಸಂಗತಿಯು ಸಂಭವಿಸಬಹುದಾದ ಸೂಚನೆಯೂ ಇತ್ತು!

ಆಂಟಿ ನುಡಿದರು.

“ನನ್ನ ಅರಿವಿಗೆ ಬಾರದಂತೆ ನಾನು ಒಂದು ಸುಳಿಯಲ್ಲಿ ಬಿದ್ದೆ. ಅಷ್ಟೇ ಅಲ್ಲ, ನಿನ್ನನ್ನೂ ಬೀಳಿಸಿದೆ. ಆ ಸುಳಿಯಿಂದ ಹೊರಬರಲು, ಅದರಿಂದ ನಿನ್ನನ್ನು ಹೊರತರಲು ನಾನು ತುಂಬಾ ಪ್ರಯತ್ನ ಪಟ್ಟೆ. ನಾನು ಹೇಗೋ ಆ ಸುಳಿಯಿಂದ ಹೊರಬಂದಿದ್ದೇನೆ ಅಂತ ನನಗನ್ನಿಸ್ತಾ ಇದೆ. ಆದರೆ ಅದರಿಂದ ನಿನ್ನನ್ನು ಹೇಗೆ ಹೊರತರೋದು ಅನ್ನೋದೇ ನನ್ನ ಮುಂದಿರೋ ಪ್ರಶ್ನೆ!”

ಅಷ್ಟನ್ನು ಹೇಳಿ ಸುಮ್ಮನಾದರು ಆಂಟಿ.

ನನಗೆ ಅವರ ಮಾತಿನ ತಲೆಬುಡ ಅರ್ಥವಾಗಲಿಲ್ಲ. ಅವರು ಯಾವುದೋ ಕಥೆಯನ್ನು ಆರಂಭಿಸಿದಂತೆ ಇತ್ತು. ಆದರೆ ಯಾವ ಪ್ರತಿಕ್ರಿಯೆಯನ್ನು ನೀಡಬೇಕೆಂಬುದೇ ನನಗೆ ತಿಳಿಯಲಿಲ್ಲ.

ಸೂರ್ಯನು ಅಸ್ತಮಿಸಿದ ದಿಕ್ಕಿನತ್ತ ತಿರುಗಿದ್ದ ಅವರ ಮುಖದ ಮೇಲೆ ಆ ದಿಕ್ಕಿನಲ್ಲಿ ಮೂಡಿದ ಕೆಂಬಣ್ಣದ ಛಾಯೆಯಿತ್ತು. ಮೂಡಣ ದಿಕ್ಕಿನಲ್ಲಿದ್ದ ಆಂಟಿಯತ್ತ ಮುಖ ತಿರುಗಿಸಿ ಕುಳಿತಿದ್ದ ನನ್ನ ಮುಖದ ಮೇಲೆ ಬಹುಶಃ ಆ ದಿಕ್ಕಿನ ಕಪ್ಪು ಛಾಯೆ ಆವರಿಸಿರಬೇಕು! ಆದರೆ ಅದು ತಿಳಿಯುತ್ತಿದ್ದುದು ಆಂಟಿಗೆ ಮಾತ್ರ!

ಆಂಟಿಯ ಮಾತು ಮುಂದುವರಿಯಿತು,

“ನೀನು ನನಗಿಂತ ಪ್ರಾಯದಲ್ಲಿ ತುಂಬಾ ಚಿಕ್ಕೋನು. ನಮ್ಮಿಬ್ಬರ ಗೆಳೆತನ, ಸ್ನೇಹ, ಪ್ರೀತಿಗಳು ನೋಡಲು ಚೆನ್ನಾಗಿರೋಲ್ಲ. ಅಲ್ವೇನೋ?”

ಆ ಮಾತಿನಲ್ಲಿ ಕಠೋರತೆ ಇತ್ತು. ಅನುನಯನವೂ ಇತ್ತು.

ಮನಸ್ಸಿನ ಯಾವುದೋ ಮೂಲೆಯಲ್ಲಿ ತಳಮಳವಾದ ಸೂಚನೆ ದೊರೆಯಿತು. ಮಾತು ಅಪಾಯಕರ ಹಾದಿಯತ್ತ ಸಾಗುತ್ತಿದೆ ಎಂಬರಿವೂ ಮನಸ್ಸಿಗಾಯಿತು.

ಯಾಕೋ ಇಡೀ ಜಗತ್ತಿಗೇ ಕಾರ್ಗತ್ತಲು ಆವರಿಸಿ ಬಿಡಬಹುದೇನೋ ಎಂಬ ಭೀತಿ ನನ್ನಲ್ಲಿ ಆವರಿಸಿಕೊಂಡಂತೆ ನನಗನ್ನಿಸಿತು.

ಅದೇ ಸಮಯಕ್ಕೆ ಮಕ್ಕಳು ಆಟವನ್ನು ಮುಗಿಸಿ ನಿಧಾನವಾಗಿ ನಡೆಯುತ್ತಾ ಇತ್ತ ಬರತೊಡಗಿದರು.

“ನಿನ್ ಜೊತೆ ಮಾತಾಡಲಿಕ್ಕೆ ತುಂಬಾ ವಿಷಯಗಳಿವೆ. ಆದರೆ ಈಗ ಸಮಯ ಇಲ್ಲ. ಬಾ ಮನೆಗೆ ಹೋಗೋಣ”

ಎಂದಷ್ಟೇ ನುಡಿದು ಆಂಟಿ ಸುಮ್ಮನಾದರು.

ಮನಸ್ಸಿನ ತುಂಬಾ ಬಿರುಗಾಳಿ ಎದ್ದಿತ್ತು. ಎಲ್ಲವೂ ಅಲ್ಲೋಲಕಲ್ಲೋಲ!

ಆಂಟಿ ಕಟ್ಟೆಯ ಮೇಲಿನಿಂದ ಎದ್ದು ಮಕ್ಕಳ ಕೈಯನ್ನು ಹಿಡಿದುಕೊಂಡು ಮನೆಯತ್ತ ಹೆಜ್ಜೆ ಹಾಕತೊಡಗಿದರು.

ಹುಲ್ಲುಕಡ್ಡಿಯ ಸಹಾಯವೂ ಇಲ್ಲದಂತೆ ನಾನೆಲ್ಲೋ ಮುಳುಗಿ ಹೋಗುತ್ತಿರುವಂತೆ ನನಗೆ ಭಾಸವಾಯಿತು. ಆದರೂ ಸಾವರಿಸಿ ಎದ್ದು ಆಂಟಿಯನ್ನು ಹಿಂಬಾಲಿಸತೊಡಗಿದೆ.

ಮನೆಯನ್ನು ಬಿಟ್ಟು ಮೊದಲ ಸಲ ಹೊರಗೆ ಬಂದಿರುವ ಕಾರಣಕ್ಕೋ ಅಥವಾ ಆಂಟಿಯ ಮಾತುಗಳ ಪರಿಣಾಮವೋ ಏನೋ ಆ ರಾತ್ರಿ ನಿದ್ದೆ ನನ್ನ ಬಳಿ ಸುಳಿಯಲೇ ಇಲ್ಲ. ನಿದ್ರಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಸಾಧ್ಯವಾಗಲಿಲ್ಲ. ನಿದ್ದೆ ಬಾರದ ಕಾರಣಕ್ಕೆ ಆಂಟಿಯ ಮಾತುಗಳು ರಾತ್ರಿಯಿಡೀ ನೆನಪಾಗಿ ಭರ್ಜಿಯಂತೆ ನನ್ನನ್ನು ತಿವಿಯುತ್ತಿದ್ದವು. ಮನಸ್ಸನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಆಂಟಿಯೊಂದಿಗೆ ಕಳೆದ ಆ ರಸಮಯ ದಿನವನ್ನು ಕಣ್ಣಮುಂದೆ ತರುವ ಪ್ರಯತ್ನವನ್ನೂ ಮಾಡಿದೆ. ಅದೂ ಪ್ರಯೋಜನವಾಗಲಿಲ್ಲ.

ನಿದ್ದೆ ಬರುವುದು ಸಾಧ್ಯವಿಲ್ಲ ಎಂದೆನಿಸಿದಾಗ, ಇನ್ನು ಹೊರಗೆ ಹೋಗಿ ಕುಳಿತುಕೊಳ್ಳುವುದೇ ಲೇಸು ಎಂದೆಣಿಸಿ ನಿಧಾನವಾಗಿ ಮೇಲೆದ್ದೆ. ನಾನು ಮಲಗಿದ್ದುದು ಹೊರಗಿನ ಕೋಣೆಯಲ್ಲಿ. ಉಳಿದವರೆಲ್ಲಾ ಪಕ್ಕದ ಒಳಕೋಣೆಯಲ್ಲಿ ನಿದ್ರಿಸುತ್ತಿದ್ದರು. ಆ ಕೋಣೆಯಿಂದ ಗೊರಕೆಗಳ ಸದ್ದು ನಿರಂತರವಾಗಿ ಕೇಳಿಬರುತ್ತಿತ್ತು. ಬಹುಶಃ ಎಲ್ಲರೂ ಒಳ್ಳೆಯ ನಿದ್ರೆಯಲ್ಲಿರಬೇಕು ಎಂದೆಣಿಸಿ ನಾನು ನಿಧಾನವಾಗಿ ಎದ್ದು ಸದ್ದಾಗದಂತೆ ಬಾಗಿಲನ್ನು ತೆರೆದು ಹೊರಬಂದು ಮತ್ತೆ ಮುಚ್ಚಿದೆ.

ಹೊರಗೆ ನಿರ್ಮಲವಾದ ಆಕಾಶದಡಿಯಲ್ಲಿ ಭೂಮಿಯ ಸಮಸ್ತವೂ ನಿದ್ರೆಗೆ ವಶವಾದಂತೆ ಇದ್ದವು. ಆದರೆ ಆಕಾಶದ ತಾರೆಗಳು ಮಾತ್ರ ತಮಗೂ ನಿದ್ದೆ ಬರಲಿಲ್ಲವೇನೋ ಎಂಬಂತೆ ಕಣ್ಣು ಮಿಟುಕಿಸುತಿದ್ದವು. ತಂಗಾಳಿಗೂ ನಿದ್ದೆಯಿರಲಿಲ್ಲ. ಅದೂ ಅಸಹನೆಯಿಂದ ಅತ್ತಿತ್ತ ಸುಳಿದಾಡುತ್ತಿತ್ತು. ಚಂದ್ರಮನಂತೂ ಯಾವಾಗಲೋ ನಿದ್ದೆ ಬಂತೆಂದು ಓಡಿಬಿಟ್ಟಿದ್ದ.

ನಾನು ಪೇರಿಸಿಟ್ಟಿದ್ದ ಕಲ್ಲುಚಪ್ಪಡಿಯ ಬಳಿಗೆ ಸದ್ದಿಲ್ಲದಂತೆ ನಡೆದು ಬಂದು ಅದರ ಮೇಲೆ ತಳವೂರಿದೆ.

ಕೈಗಳೆರಡನ್ನೂ ಗಲ್ಲಕ್ಕಾನಿಸಿ ಕುಳಿತೆ.

ಕೆಲವು ಕ್ಷಣಗಳು ಉರುಳಿರಬಹುದು. ಏನೋ ಸದ್ದಾದಂತಾಗಿ ಬೆಚ್ಚಿ ನಾನು ಪಕ್ಕಕ್ಕೆ ತಿರುಗಿ ನೋಡಿದೆ. ನಾನು ಮನೆಯಿಂದ ಹೊರಬಂದ ಮೇಲೆ ಮುಚ್ಚಿದ್ದ ಬಾಗಿಲು, ತೆರೆದಿರುವುದು ಕಾಣಿಸಿತು. ತೆರೆದ ಬಾಗಿಲಿನಿಂದ ಹೊರಬಂತು ಒಂದು ಆಕೃತಿ!

ಅಚ್ಚರಿಯಿಂದ ನಾನು ಆ ಆಕೃತಿಯನ್ನು ದೃಷ್ಟಿಸಿದೆ. ಅದು ನನ್ನತ್ತಲೇ ನಡೆದು ಬರುತ್ತಿರುವುದು ಕಾಣಿಸಿತು. ಅದರ ನಡಿಗೆಯಲ್ಲೇ ಅದೊಂದು ಹೆಣ್ಣು ಎಂಬುದು ತಿಳಿಯಿತು.